ತೋಡುದೋಣಿ -
ಹುಟ್ಟುಹಾಕಿ ಇಲ್ಲವೇ ಪಟಗಳನ್ನು ಕಟ್ಟಿ ನಡೆಸುವ ಉದ್ದ ಮತ್ತು ಇಕ್ಕಟ್ಟಾದ ದೋಣಿ (ಕನೂ). ನೈಲ್ ನದಿಯ ಮೇಲೆ ಓಡಾಡುವ ದೋಣಿಗಳನ್ನು ಜೊಂಡುಹುಲ್ಲಿನಿಂದ ಕಟ್ಟುತ್ತಿದ್ದರು. ಭಾರತದಲ್ಲಿ ಒಂದೇ ಮರದಿಂದ ಕೊರೆದು ಮಾಡಿದ ದೋಣಿಗಳು ಎಲ್ಲ ಕಡೆಗಳಲ್ಲಿಯೂ ಉಪಯೋಗದಲ್ಲಿವೆ. ಅಮೆರಿಕದ ಇಂಡಿಯನರು ಎರಡು ಬರ್ಚ್ ಮರದ ತೊಗಟೆಗಳನ್ನು ನೀರು ಸೋರದ ಹಾಗೆ ಅಂಟಿನಿಂದ ಕೂಡಿಸಿ ದೋಣಿಗಳನ್ನು ಮಾಡುತ್ತಿದ್ದರು. ತೀರ ಉತ್ತರದಲ್ಲಿ ಎಸ್ಕಿಮೊ ಜನರು ಮರದ ಚೌಕಟ್ಟಿನ ಮೇಲೆ ಸೀಲ್ ಮೃಗದ ಚರ್ಮ ಹೊದಿಸಿದ ದೋಣಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದರು. ರೋಮನ್ನರ ಕಾಲದಲ್ಲಿ ವೇಲ್ಸಿನಲ್ಲಿ ಗುಂಡಾದ ಬುಟ್ಟಿಗಳಿಗೆ ಚರ್ಮವನ್ನು ಹೊದಿಸಿದ ದೋಣಿಗಳನ್ನು ಮೀನು ಹಿಡಿಯುವುದಕ್ಕೆ ಉಪಯೋಗಿಸುತ್ತಿದ್ದರು. ಐರ್ಲೆಂಡಿನಲ್ಲಿ ಕ್ಯಾನ್ವಾಸಿನಿಂದ ಮುಚ್ಚಿದ ಉದ್ದವಾದ ದೋಣಿಗಳಲ್ಲಿ ಸಮುದ್ರದ ಮೇಲೆ ಹೋಗುತ್ತಿದ್ದರು. ನ್ಯೂಜಿಲೆಂಡಿನಲ್ಲಿ ದೋಣಿಗಳಿಗೆ ಕೆತ್ತನೆಯ ಕೆಲಸವನ್ನು ಮಾಡಿ ಅಲಂಕರಿಸುತ್ತಿದ್ದರು. ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಎರಡು ದೋಣಿಗಳನ್ನು ಪಕ್ಕದಲ್ಲಿ ಇಟ್ಟು ಕಟ್ಟಿ ದೀರ್ಘವಾದ ಸಮುದ್ರಯಾನಗಳನ್ನು ಮಾಡುತ್ತಿದ್ದರು. ಭಾರತದಲ್ಲಿ ಇಂಥ ಜಂಗಲುಗಳನ್ನು ಹೊಳೆಗಳ ಮೇಲೆ ಉಪಯೋಗಿಸುತ್ತಾರೆ.
ತೋಡು ದೋಣಿಗಳಲ್ಲಿ ಹುಟ್ಟುಹಾಕುವವರು ಇಬ್ಬರಿರುತ್ತಾರೆ. ಮುಂದುಗಡೆ ಇರುವಾತ ದೋಣಿಗಳನ್ನು ತಿರುಗಿಸುತ್ತಾನೆ. ಒಂದೊಂದು ದೋಣಿಯಲ್ಲಿಯೂ ಎರಡು ಪೀಠಗಳಿರುತ್ತವೆ. ಆದರೂ ಆನುಭವಶಾಲಿ ಪೀಠವನ್ನು ಮುಟ್ಟದೇ ಮೊಣಕಾಲುಗಳನ್ನು ದೋಣಿಯ ತಳದ ಮೇಲೆ ಊರಿ ದೋಣಿಯ ಒಂದು ಪಕ್ಕಕ್ಕೆ ಒರಗಿಕೊಂಡು ತನ್ನ ಬಲವನ್ನೆಲ್ಲ ಉಪಯೋಗಿಸಿ ಹುಟ್ಟುಹಾಕುತ್ತಾನೆ. ಎಷ್ಟೋ ವೇಳೆ ಒಂದೇ ಹುಟ್ಟಿನಿಂದ ದೋಣಿಯನ್ನು ನಡೆಸುವುದೂ ಉಂಟು. ಹುಟ್ಟು ಹಾಕುವುದು ಸುಲಭವಾಗಬೇಕಾದರೆ ದೋಣಿ ಮೂತಿ ಬೆನ್ನಿಗಿಂತ ನೀರಿನ ಮೇಲುಗಡೆ ಕೊಂಚ ಎತ್ತರವಾಗಿರಬೇಕು. ಹೊಳೆಯ ಮೇಲೆ ಪ್ರವಾಹದೊಂದಿಗೆ ಹೋಗುವಾಗಲೂ ಸಮುದ್ರದ ಮೇಲೆ ತೆರೆನೊರೆಯ (ಸರ್ಫ್) ಮೂಲಕ ದಡದ ಮೇಲೆ ಬರುವಾಗಲೂ ಮೂತಿಯ ಕಡೆ ಭಾರವಾಗಿರಬೇಕು. ಹೊಳೆ ಇಳಿಜಾರಿನಲ್ಲಿ ಹರಿಯುವಾಗಲೂ ಸಮುದ್ರದ ಕಡೆಗೆ ತೀರದಿಂದ ಹೋಗುವಾಗಲೂ ಮೂತಿಯ ಕಡೆ ಹಗುರವಾಗಿರಬೇಕು.

ಕ್ರೀಡೆಗಾಗಿ ದೋಣಿಗಳನ್ನು ಉಪಯೋಗಿಸುವುದು ಇಂಗ್ಲೆಂಡಿನಲ್ಲಿ 1865 ರಲ್ಲಿ ಪ್ರಾರಂಭವಾಯಿತು. ದೋಣಿಯ ಉದ್ದ 12 ರಿಂದ 15 ಅಡಿ. ಅಗಲ 2 1/2 ಅಡಿಯಿಂದ 3 ಅಡಿ. ಆಳ 10 ರಿಂದ 16 ಅಂಗುಲ. ಹುಟ್ಟು 7 ಅಡಿ ಉದ್ದ. 6 ಅಂಗುಲ ಅಗಲವಾಗಿರುತ್ತವೆ. ನಡೆಸುವವ ದೋಣಿಯ ಗುಂಡಿಯಲ್ಲಿ ಕುಳಿತುಕೊಂಡು ಒಂದು ಸಾರಿ ಈ ಕಡೆಯೂ ಇನ್ನೊಂದು ಸಾರಿ ಆ ಕಡೆಯೂ ಹುಟ್ಟುಗಳನ್ನು ಹಾಕುತ್ತಾನೆ. ಇಂಗ್ಲೆಂಡಿನಲ್ಲಿಯೂ ಫ್ರಾನ್ಸಿನಲ್ಲಿಯೂ ಕ್ಲಬ್ಬುಗಳು ಸ್ಥಾಪಿತವಾದವು. ದೋಣಿಗಳಲ್ಲಿ ಸಮುದ್ರಯಾನ ಸಾಮಾನ್ಯವಾಯಿತು. ಕ್ರಮೇಣ ಈ ದೋಣಿಯನ್ನು ಜೂಜಿನ ದೋಣಿಯಾಗಿ ಪರಿವರ್ತಿಸಿದರು. 171/2 ಅಡಿ ಉದ್ದ 21/2 ಅಡಿ ಅಗಲ, ಒಂದು ಅಡಿ ಆಳವಾದ ಇದರಲ್ಲಿ ಮಧ್ಯೆ ನೀರು ಒಳಕ್ಕೆ ಬರದ ಎರಡು ತಡೆಗಳನ್ನು ಕಟ್ಟಿ ಮೂರು ಅಂಕಣಗಳಾಗಿ ಭಾಗಿಸಿದರು. ಗಂಟೆಗೆ 10 ಮೈಲಿಗಳ ವೇಗದಲ್ಲಿ ಹೋಗಬಹುದಾಗಿತ್ತು. 

ಅಮೆರಿಕದ ದೋಣಿಯ ಸಂಘ 1880 ರಲ್ಲಿ ಸ್ಥಾಪಿತವಾಯಿತು. ಮೊದಲು ಎರಡೇ ನಮೂನೆಯ ದೋಣಿಗಳಿದ್ದವು; 1 ಮಧ್ಯದ ಹಲಗೆ, ಚುಕ್ಕಾಣಿ ಹಲಗೆ, ಜಾರುವ ಪೀಟ - ಇವು ಇರುವ ಅಟ್ಟವಿರುವ ದೋಣಿ; 2 ಬಿಳಿಯ ಸಿಡಾರ್ ಮರದ ಹಲಗೆಗಳಿಂದ ಕಟ್ಟಿ ಕ್ಯಾನ್‍ವಾಸಿನ ಹೊದಿಕೆಯಿಲ್ಲದೇ ಇರುವ ತೆರೆದ ದೋಣಿ. ದೋಣಿಗಳ ಮಧ್ಯಗಳಲ್ಲಿ 16 ಅಡಿ ಉದ್ದ 21/2 ಅಡಿ ಅಗಲದ ಸಣ್ಣ ದೋಣಿಗಳೇ ಸಾಮಾನ್ಯವಾಗಿ ಗೆಲ್ಲುತ್ತವೆ. ಪಟಗಳನ್ನು ಜೋಡಿಸಿದ ಎರಡು ಪಟಸ್ತಂಭಗಳಿರುವ ಈ ಸಣ್ಣ ದೋಣಿಗಳು ಅವುಗಳ ಎರಡರಷ್ಟು ದೊಡ್ಡದಾದ ಓಡುದೋಣಿಗಳಿಗಿಂತ ವೇಗವಾಗಿ ಹೋಗಬಲ್ಲವು.

1917ರಲ್ಲಿ ಅಮೆರಿಕದಲ್ಲಿ ಪಂದ್ಯಗಳಿಗಾಗಿ (1) 17 ಅಡಿ ಉದ್ದ, 34 ಅಂಗುಲ ಅಗಲ ಮತ್ತು (2) 18 ಅಡಿ ಉದ್ದ 42 ಅಂಗುಲ ಅಗಲದ ದೋಣಿಗಳನ್ನು ತಯಾರಿಸಿದರು. ಸಾಮಾನ್ಯವಾಗಿ ಅಟ್ಟಗಳಿರುವ ದೋಣಿಗಳು ಪಂದ್ಯಗಳಲ್ಲಿ ಗೆದ್ದರೂ ಈಚೆಗೆ ಪಟಗಳನ್ನು ಕಟ್ಟಿದ ತೆರೆದ ದೋಣಿಗಳು ರೂಢಿಗೆ ಬರುತ್ತಿವೆ. ಹುಟ್ಟುಗಳಿರುವ ದೋಣಿಗಳಲ್ಲಿ ಕೆಲವೇ ನಮೂನೆಗಳನ್ನು ಪಂದ್ಯಗಳಲ್ಲಿ ಉಪಯೋಗಿಸಿದರು. ಕ್ರಮೇಣ ಒಂದು ದೋಣಿಗೆ ಅನೇಕ ಹುಟ್ಟುಗಳನ್ನು ನಡೆಸುವವರನ್ನು ಸೇರಿಸುವುದು ರೂಢಿಗೆ ಬಂತು. ಯುದ್ಧದಲ್ಲಿ ಕಾವಲುದೋಣಿ ಮತ್ತು ಪಂದ್ಯದ ಹುಟ್ಟಿನ ದೋಣಿ- ಇವೆರಡೇ ಕೊನೆಯಲ್ಲಿ ಸ್ಥಾಯಿಯಾಗಿ ನಿಂತವು. ಈಚೆಗೆ ಅಲ್ಯೂಮಿನಿಯಮ್ಮಿನ ಫೈಬರ್ ಗ್ಲಾಸ್ ಮತ್ತಿತರ ಕೃತಕ ವಸ್ತುಗಳಿಂದ ಮಾಡಿದ ದೋಣಿಗಳೂ ಬಂದಿವೆ.		  (ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ